ದೇವಸ್ಥಾನದ ಪ್ರಸಾದದ ರುಚಿಯ ಕಾಯನ್ನ ಮಾಡುವುದು ಹೇಗೆ?? ಮನೆಯಲ್ಲಿ ಮಾಡಿ ಎಲ್ಲರೂ ಪ್ಲೇಟ್ ಖಾಲಿ ಮಾಡ್ತಾರೆ.

ನಮಸ್ಕಾರ ಸ್ನೇಹಿತರೇ ದೇವಸ್ಥಾನದ ಪ್ರಸಾದದ ರೂಪದಲ್ಲಿ ಕೊಡುವ ಆಹಾರವನ್ನು ನೀವೆಲ್ಲಾ ತಿಂದಿರಬಹುದು. ಸಾಮಾನ್ಯವಾಗಿ ಬೆಂಗಳೂರಿನ ಎಲ್ಲಾ ದೇವಾಲಯಗಳಲ್ಲೂ ಆಯಾ ವಾರದಂದು ರುಚಿಕರವಾದ ಪ್ರಸಾದವನ್ನು ಕೊಡಲಾಗುತ್ತದೆ. ಅದರಲ್ಲಿ ಕಾಯನ್ನ ಕೂಡ ಒಂದು. ಅದನ್ನು ಮನೆಯಲ್ಲಿಯೇ ಮಾಡಿ ಸವಿದರೆ ಹೇಗೆ? ಮಡೋದನ್ನ ನಾವು ಹೇಳಿ ಕೊಡ್ತೇವೆ. ಮಾಡಿ ತಿನ್ನುವ ಕೆಲಸ ನೀವು ಮಾಡಿ ಎನಂತಿರಾ?

ಕಾಯನ್ನ ಮಾಡಲು ಈ ಸಾಮಗ್ರಿಗಳು ಬೇಕು: ಒಂದು ಕಪ್ ಅಕ್ಕಿ (ಸೋನಾ ಮಸೂರಿ ರಾ ರಸ್ ತೆಗೆದುಕೊಂಡರೆ ಉತ್ತಮ) ತೆಂಗಿನ ಕಾಯಿ ತುರಿ, ಒಂದು ದೊಡ್ಡ ಕಪ್ ನಷ್ಟು, ಹಸಿ ಮೆಣಸಿನ ಕಾಯಿ ೫, ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು, ಉದ್ದಿನ ಬೇಳೆ, ಕಡ್ಲೆ ಬೇಳೆ, ಸಾಸಿವೆ, ಇಂಗು, ತುರಿದ ಶುಂಠಿ ಹಾಗೂ ಗೋಡಂಬಿ. ತುಪ್ಪ ೩ ಟೇಬಲ್ ಸ್ಪೂನ್, ನಿಂಬೆರಸ ಒಂದು ಚಮಚ, ಸಂಡಿಗೆ ಮೆಣಸು ೪-೫ (ಬೇಕಿದ್ದರೆ ಮಾತ್ರ ಬಳಸಿ), ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ೨೦ ನಿಮಿಷ ನೆನೆಸಿ. ಒಂದು ಕುಕ್ಕರ್ ನಲ್ಲಿ ಅಕ್ಕಿ ಹಾಗೂ ೨ ಕಪ್ ನೀರು ಹಾಗು ಸ್ವಲ್ಪ ತುಪ್ಪ ಹಾಕಿ ೨ ವಿಶಲ್ ಕೂಗಿಸಿ. ನಂತರ ಕುಕ್ಕರ್ ಆರಿದ ಮೇಲೆ ಹೊರಗೆ ತೆರೆದಿಡಿ. ನಂತರ ಒಂದು ಪ್ಯಾನ್ ಗೆ ೨ ಚಮಚ ತುಪ್ಪ ಹಾಕಿ, ಅದರಲ್ಲಿ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ಹಾಗೆಯೇ ಸಂಡಿಗೆ ಮೆಣಸನ್ನೂ ಕೂಡ ಹುರಿದು ತೆಗೆದಿಡಿ.

ಇದೀಗ ಅದೇ ಪ್ಯಾನ್ ಗೆ ಮತ್ತೆ ಸ್ವಲ್ಪ ತುಪ್ಪ ಸೇರಿಸಿ ಒಗ್ಗರಣೆ ಸಾಮಗ್ರಿಗಳಾದ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಕರಿಬೇವು, ಹಸಿಮೆಣಸು, ಶುಂಠಿ ಎಲ್ಲವನ್ನೂ ಸೇರಿಸಿ ಹುರಿಯಿರಿ. ಇದಕ್ಕೆ ಇಂಗನ್ನು ಹಾಕಿ ಹುರಿಯಿರಿ, ನಂತರ ಕಾಯಿತುರಿಯನ್ನು ಹಾಕಿ ೨ ನಿಮಿಷ ಹುರಿದುಕೊಳ್ಳಿ. ನಂತರ ಈ ಮಸಾಲೆಯನ್ನು ಆರಿದ ಅನ್ನಕ್ಕೆ ಸೇರಿಸಿ. ಇದಕ್ಕೆ ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಸಂಡಿಗೆ ಮೆಣಸು ಹಾಗೂ ಗೋಡಂಬಿ ಇವುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದೀಗ ರುಚಿರುಚಿಯಾದ ಸುಲಭವಾದ ಕಾಯನ್ನ ರೆಡಿ. ಇದನ್ನು ಮಾಡುವ ವಿಧಾನವನ್ನು ಈ ಕೆಳಾಗಿನ ವಿಡಿಯೋ ನೋಡಿಯೂ ತಿಳಿದುಕೊಳ್ಳಬಹುದು.