ನಿಮಗೆ ಮೀನಿನ ಸಾಂಬರ್ ಮಾಡಲು ಬರುವುದಿಲ್ಲವೇ?? ಚಿಟಿಕೆಯಷ್ಟು ಸುಲಭವಾಗಿ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೀನಿನ ಸಾರು ಕರಾವಳಿ ಕಡೆ ತುಂಬಾನೇ ಫೇಮಸ್. ಎಷ್ಟೋ ಜನ ನಾನ್ ವೆಜ್ ಪ್ರಿಯರು ಅಲ್ಲಿಂದ ಮೀನಿನ ಖಾದ್ಯಗಳನ್ನು ತಿಂದು ಅದನ್ನು ತಾವೂ ರೆಡಿ ಮಾಡ್ಬೇಕು ಅಂತ ಆಸೆ ಪಡ್ತಾರೆ. ಆದ್ರೆ ಮೀನಿನ ರೆಸಿಪಿಯನ್ನ ಸರಿಯಾಗಿ ಮಾಡಿದ್ರೆ ಮಾತ್ರ ಸಕ್ಕತ್ ರುಚಿಯಾಗಿರುತ್ತದೆ. ಆದ್ರೆ ನಿನಗೆ ಮಾಡೋದಕ್ಕೆ ಬರಲ್ವಾ ? ಚಿಂತೆ ಬೇಡ, ಸುಲಭವಾಗಿ ರುಚಿಯಾದ ಮೀನಿನ ಸಾರು ಮಾಡುವ ರೆಸಿಪಿ ಇಲ್ಲಿದೆ ನೋಡಿ.

ಮೀನಿನ ಸಾರು ಮಾಡಲು ಈ ಸಾಮಗ್ರಿಗಳು ಬೇಕು: ಮೀನು ಒಂದು ಕೆಜಿ ( ಸಿಬಾಸ್ ಮೀನು), ಈರುಳ್ಳಿ ಹಾಗೂ ಟೊಮ್ಯಾಟೋ ತಲಾ2, ತೆಂಗಿನಕಾಯಿ ತುರಿ ಅರ್ಧ ಕಪ್, ಹುಣಸೆಹಣ್ಣು ಸ್ವಲ್ಪ, ಎಣ್ಣೆ ಸ್ವಲ್ಪ, ಬ್ಯಾಡಗಿ ಮೆಣಸಿನಕಾಯಿ 15, ಖಾರದ ಮೆಣಸಿನಕಾಯಿ 8, ಬೆಳ್ಳುಳ್ಳಿ 2 ಗಡ್ಡೆ, ಕೊತ್ತಂಬರಿ ಬೀಜ2 ಚಮಚ, ಜೀರಿಗೆ 2 ಚಮಚ, ಕಾಳುಮೆಣಸು ಅರ್ಧ ಚಮಚ, ಅರಿಶಿನ ಸ್ವಲ್ಪ, ಮೆಂತ್ಯ ಹಾಗೂ ಸಾಸಿವೆ ಸ್ವಲ್ಪ, ಇಂಗು ಚಿಟಿಕೆಯಷ್ಟು, ಉಪ್ಪು ರುಚಿಗೆ ತಕ್ಕಷ್ಟು.

ಮೀನು ಸಾರು ಮಾಡುವ ವಿಧಾನ ಹೀಗಿದೆ: ಮೊದಲಿಗೆ ಹುಣಸೆಹಣ್ಣಿನ ರಸವನ್ನು ತಯಾರಿಸಿಟ್ಟುಕೊಳ್ಳಿ. ಒಂದು ಬಾಣಲಿಗೆ ಧನಿಯಾ, ಜೀರಿಗೆ, ಕಾಳುಮೆಣಸು ಹಾಗೂ ಮೆಂತ್ಯ ಹಾಕಿ ಹುರಿದುಕೊಳ್ಳಿ. ನಂತರ ಮಿಕ್ಸರ್ ಗೆ ಇವುಗಳನ್ನು ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸನ್ನು ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ಇದನ್ನೂ ಕುಡಾ ಮಿಕ್ಸರ್ ಜಾರ್ ಗೆ ಹಾಕಿ. ಮತ್ತೆ ಬಾಣಲೆಗೆ ಎಣ್ಣೆಯನ್ನು ಹಾಕಿ ಹೆಚ್ವಿಟ್ಟುಕೊಂಡ ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಇದು ಸರಿಯಾಗಿ ಬೆಂದ ನಂತರ ಮಿಕ್ಸಿ ಜಾರ್ ಗೆ ಉಳಿದ ಮಸಾಲೆ ಪದಾರ್ಥಗಳ ಜೊತೆ ಸೇರಿಸಿ. ಇದಕ್ಕೆ ತೆಂಗಿನಕಾಯಿ ತುರಿ, ಅರಿಶಿನ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿ.

ಈಗ ಒಂದು ಒಗ್ಗರಣೆ ಮಾಡಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ನಂತರ ಸಾಸಿವೆ, ಇಂಗು, ಒಣಮೆಣಸು ಹಾಗೂ ಕರಿಬೇವು ಹಾಕಿ ಹುರಿದುಕೊಳ್ಳಿ. ಇದಕ್ಕೆ ಹುಣಸೆಹಣ್ಣಿನ ರಸವನ್ನು ಸೇರಿಸಿ. ಇದಕ್ಕೆ ರುಬ್ಬುಕೊಂಡ ಮಸಾಲೆಯನ್ನು ಸೇರಿಸಿ ಮಿಕ್ಸ್ ಮಾಡಿ. ಕಡಿಮೆ ಉರಿಯಲ್ಲಿಯೇ ಬೇಯಿಸಿಕೊಳ್ಳಿ. ಇದಕ್ಕೆ ನಿಮಗೆ ಬೇಕಾದಷ್ಟು ನೀರನ್ನು ಸೇರಿಸಿ ಕುದಿಸಿ. ಇದಕ್ಕೆ ಉಪ್ಪನ್ನು ಹಾಕಿ. ಇದು ಚೆನ್ನಾಗಿ ಕುದಿ ಬಂದ ಮೇಲೆ ತೊಳೆದು ಕತ್ತರಿಸಿ ಇಟ್ಟುಕೊಂಡ ಮೀನಿನ ತುಂಡುಗಳನ್ನು ಸೇರಿಸಿ ಒಮ್ಮೆ ಮಿಶ್ರಣ ಮಾಡಿ. ಮುಚ್ಚಳ ಮುಚ್ಚಿ 5-6 ನಿಮಿಷ ಬೇಯಿಸಿದರೆ ರುಚಿಕರ ಮೀನಿನ ಸಾರು ಸಿದ್ಧ. ಇದನ್ನು ಮುದ್ದೆ, ಅನ್ನ, ಚಪಾತಿಯೊಟ್ಟಿಗೆ ತಿನ್ನಬಹುದು.

Comments are closed.