ಊಟಕ್ಕೆ ಇಂಥದ್ದೊಂದು ಹಾಲು ಸಾರು ಇದ್ರೆ ಸಾಕು ಬೇರೇನೂ ಬೇಕಾಗೋದೇ ಇಲ್ಲ, ಮನೆಯಲ್ಲಿಯೇ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಪದ್ಧತಿ ಇದೆ. ಅವುಗಳಲ್ಲಿ ರಾಗಿ ಮುದ್ದೆ ಹಾಗೂ ಅದಕ್ಕೆ ಸರಿಹೊಂದುವ ಸಾರು ರುಚಿಕರವಾಗಿರುತ್ತವೆ. ಇಂದು ಹಳ್ಳಿ ಶೈಲಿಯ ಬಾಯಲ್ಲಿ ನೀರೂರಿಸುವ ಹಾಲು ಸಾರು ಮಾಡುವ ವಿಧಾನವನ್ನು ನೋಡೋಣ. ಹಾಲು ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಕಪ್ ಹಾಲು, ಹೆಚ್ಚಿಟ್ಟುಕೊಂಡ ಆಲೂಗಡ್ಡೆ ಹಾಗೂ ಬದನೆಕಾಯಿ ತಲಾ2, ಒಂದು ಕಪ್ ಅವರೆಕಾಳು, ತೆಂಗಿನತುರಿ ಕಾಲು ಕಪ್, ಬೆಳ್ಳುಳ್ಳಿ ಒಂದು ಗಡ್ಡೆ, ಉಪ್ಪು ರುಚಿಗೆ, ಗಸಗಸೆ 1 ಚಮಚ, ಊಟದ ಅಕ್ಕಿ 1 ಚಮಚ, ಎಣ್ಣೆ, ಒಣಮೆಣಸು 4, ಕಾಳುಮೆಣಸು 8-10, ಕರಿಬೇವು ಸ್ವಲ್ಪ.

ಹಾಲು ಸಾರು ಹೀಗೆ ಮಾಡಬೇಕು: ಮೊದಲು ಕುಕ್ಕರಿನಲ್ಲಿ ನಿಮಗೆ ಬೇಕಾದ ಸಾರಿನ ಪ್ರಮಾಣಕ್ಕೆ ಅನುಗುಣವಾಗಿ ನೀರನ್ನು ಹಾಕಿ ಜೊತೆಗೆ ಸ್ವಲ್ಪ ಉಪ್ಪನ್ನೂ ಸೇರಿಸಿ ತರಕಾರಿಗಳನ್ನು ಬೇಯಿಸಿಕೊಳ್ಳಿ. ತರಕಾರಿ ಬೇಯಲು 2 ವಿಷಲ್ ಸಾಕು. ಈಗ ಮಸಾಲೆಗೆ ರುಬ್ಬಲು ಒಂದು ಮಿಕ್ಸರ್ ಜಾರ್ ಗೆ 10ನಿಮಿಷ ನೆನೆಸಿಟ್ಟ ಅಕ್ಕಿ(ಅಕ್ಕಿ ಹಿಟ್ಟನ್ನು ಬೇಕಾದ್ರೆ ಅಕ್ಕಿ ಬದಲಾಗಿ ಸೇರಿಸಬಹದು) ತೆಂಗಿನತುರಿ, ಒಣಮೆಣಸು, ಗಸಗಸೆ, ಬೆಳ್ಳುಳ್ಳಿ, ಕಾಳುಮೆಣಸು ಹಾಗೂ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಈ ರುಬ್ಬಿದ ಮಿಶ್ರಣವನ್ನು ಕುಕ್ಕರಿನಲ್ಲಿ ಬೆಂದ ತರಕಾರಿಗೆ ಸೇರಿಸಿ. 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಈ ಸಾರಿಗೆ ಕಾಯಿಸಿ ಆರಿಸಿದಂತಹ ಹಾಲನ್ನು ಸೇರಿಸಿ ಪುನಃ2 ನಿಮಿಷ ಬೇಯಿಸಿ. ಕೊನೆಯಲ್ಲಿ ಈ ಸಾರಿಗೊಂದು ಒಗ್ಗರಣೆ. ಒಗ್ಗರಣೆಗೆ ಒಂದು ಒಗ್ಗರಣೆ ಸೌಟ್ ಗೆ ಎಣ್ಣೆಹಾಕಿ ಬಿಸಿಮಾಡಿ. ಇದಕ್ಕೆ ಸಾಸಿವೆ ಹಾಗೂ ಕರಿಬೇವನ್ನು ಹಾಕಿ ಸಿದ್ಧವಾದ ಒಗ್ಗರಣೆಯನ್ನು ಸಾರಿಗೆ ಸೇರಿಸಿ ಮಿಕ್ಸ್ ಮಾಡಿ. ಇಷ್ಟು ಮಾಡಿದರೆ ರುಚಿಕರವಾದ ಹಾಲು ಸಾರು ಸಿದ್ಧ. ಈ ಸಾರು ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಮುದ್ದೆ, ಅನ್ನ, ಚಪಾತಿಯೊಂದಿಗೆ ತಿನ್ನಲು ಸಕ್ಕಟ್ಟಾಗಿರತ್ತೆ. ಹಾಗಾದ್ರೆ ಇನ್ಯಾಕ್ ತಡ! ನೀವು ನಿಮ್ಮ ಮನೆಯಲ್ಲಿ ಈ ಹಾಲು ಸಾರು ಮಾಡಿ ಈಗಲೇ ಮನೆಯವರಿಗೆ ಬಡಿಸಿ.

Comments are closed.