ಹೋಟೆಲ್ ನಂತೆ ಮನೆಯಲ್ಲಿ ಮಲ್ಲಿಗೆ ಇಡ್ಲಿ – ರೋಸ್ಟ್ ದೋಸೆ ಮಾಡಬೇಕೆ – ಹಾಗಾದರೇ ಹಿಟ್ಟನ್ನು ಮಾಡುವ ಸರಿಯಾದ ವಿಧಾನ ಹೀಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಎಷ್ಟೇ ಮುತುವರ್ಜಿ ವಹಿಸಿ ಮಾಡಿದರೂ ಹೋಟೆಲ್ ನಲ್ಲಿ ಆಗುವಂತೆ ನಮ್ಮ ಮನೆಯಲ್ಲಿ ಒಂದು ದಿನವೂ ಮಲ್ಲಿಗೆ ಇಡ್ಲಿಯಷ್ಟು ಮೃದು ಹಾಗೂ ಗರಿಗರಿ ದೋಸೆ ಅಷ್ಟು ಕ್ರಿಸ್ಪಿಯಾಗುವುದಿಲ್ಲವೆಂದು ಹಲವಾರು ಗೃಹಿಣಿಯರು ತಮ್ಮನ್ನೆ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಆದರೇ ಮುಖ್ಯ ಸಮಸ್ಯೆ ಎಂದರೇ ಹಿಟ್ಟನ್ನು ಮಾಡುವ ವಿಧಾನ. ಈ ರೀತಿ ಮಾಡಿದರೇ, ಖಂಡಿತ ಹೋಟೆಲ್ ನಲ್ಲಿ ಸಿಗುವಂತೆ , ನಿಮ್ಮ ಮನೆಯ ಇಡ್ಲಿ, ದೋಸೆ ಇರುತ್ತದೆ. ತಿಳಿದುಕೊಳ್ಳೋಣ ಬನ್ನಿ.

ಹಿಟ್ಟಿಗೆ ಬೇಕಾಗುವ ಸಾಮಗ್ರಿಗಳು – 2 ಲೋಟ ಅಕ್ಕಿ, 1 ಲೋಟ ಉದ್ದಿನ ಬೇಳೆ, 1 ಕಪ್ ಅವಲಕ್ಕಿ, 1 ಕಪ್ ಕುಚಲಕ್ಕಿ. ಹಿಟ್ಟನ್ನು ಮಾಡುವ ವಿಧಾನ – ಒಂದು ಪಾತ್ರೆಯಲ್ಲಿ ಅಕ್ಕಿ, ಉದ್ದಿನಬೇಳೆ ಹಾಗೂ ಅವಲಕ್ಕಿ ಮತ್ತು ಕುಚಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೆನಸಿಡಬೇಕು. ಹಿಟ್ಟು ತಯಾರಿಕೆಯಲ್ಲಿ ಅವಲಕ್ಕಿ ಅಥವಾ ಕುಚಲಕ್ಕಿ ಇವೆರೆಡರಲ್ಲಿ ಯಾವುದಾದರೂ ಒಂದನ್ನ ಮಾತ್ರ ಬಳಸಬೇಕು.

ಮೇಲಿನ ಮೂರನ್ನು 6 ತಾಸುಗಳ ಕಾಲ ನೆನಸಿಟ್ಟ ನಂತರ, ಮೊದಲು ಒಂದು ಮಿಕ್ಸಿ ಜಾರಿನಲ್ಲಿ ಉದ್ದಿನ ಬೇಳೆಯನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಅದನ್ನ ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಕಾಲ ಇಡಬೇಕು. ಮತ್ತೊಂದು ಜಾರಿನಲ್ಲಿ ನೆನೆಸಿಟ್ಟ ಅಕ್ಕಿ ಮತ್ತು ಅವಲಕ್ಕಿ ಅಥವಾ ಕುಚಲಕ್ಕಿಯಲ್ಲಿ ಯಾವುದಾದರೊಂದನ್ನ ಹಾಕಿ , ಮೇಲೆ ಒಂದು ಲೋಟ ನೀರು ಹಾಕಿ ಮಿಕ್ಸಿಯಲ್ಲಿ ಸಾಧಾರಣವಾಗಿ ರುಬ್ಬಿಕೊಳ್ಳಬೇಕು. ನಂತರ ಈ ಹಿಟ್ಟು ಹಾಗೂ ಉದ್ದಿನ ಬೇಳೆಯನ್ನು ರುಬ್ಬಿದ ಹಿಟ್ಟು ಎರಡನ್ನು ಕೈಯಲ್ಲಿ ಚೆನ್ನಾಗಿ ಕಲಸುತ್ತಾ ಮಿಶ್ರಣ ಮಾಡಬೇಕು.

ನಂತರ ಈ ಮಿಶ್ರಣಕ್ಕೆ ಕೊಂಚ ಅಡುಗೆ ಸೋಡಾ ಸೇರಿಸಿ ರಾತ್ರಿ 6 ರಿಂದ 8 ಘಂಟೆಗಳ ಕಾಲ ಉಬ್ಬಳಿಕೆ ಬಿಟ್ಟು ಮೇಲೆ ಪ್ಲೇಟ್ ಮುಚ್ಚಬೇಕು. ನಂತರ ಬೆಳಿಗ್ಗೆ ಇದಕ್ಕೆ ಕಾಲು ಇಲ್ಲವೇ ಅರ್ಧದಷ್ಟು ನೀರು ಹಾಕಿ ಚೆನ್ನಾಗಿ ಕಲಸಬೇಕು. ಒಂದು ವೇಳೆ ಹಿಟ್ಟು ಉಬ್ಬು ಬಂದಿಲ್ಲವಾದರೇ ಉಗುರು ಬೆಚ್ಚಗಿನ ನೀರನ್ನ ಹಿಟ್ಟಿಗೆ ಹಾಕುತ್ತಿರಬೇಕು. ಚಳಿಗಾಲದಲ್ಲಿ ಪ್ರಕೃತಿ ತೇವಾಂಶ ಕಡಿಮೆಯಾಗುವ ಕಾರಣ ಕೆಲವೊಮ್ಮೆ ಹಾಗಾಗುತ್ತದೆ. ನಂತರ ಉಬ್ಬಿದ ಹಿಟ್ಟಿನಿಂದ ದೋಸೆ ಅಥವಾ ಇಡ್ಲಿ ಮಾಡಿದರೇ ಖಂಡಿತ ಪ್ರತಿಷ್ಠಿತ ಹೊಟೇಲ್ ನಲ್ಲಿ ತಿಂದ ಆ ಟೇಸ್ಟ್ ನಿಮ್ಮ ಮನೆಯಲ್ಲಿಯೂ ಸಹ ಸಿಗುತ್ತದೆ. ತಡ ಮಾಡಬೇಡಿ. ನಾವು ಹೇಳಿದಂತೆ ಹಿಟ್ಟನ್ನು ಮಾಡಿ , ನಿಮ್ಮ ಅನುಭವಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.