ಹೋಟೆಲ್ ಶೈಲಿಯಲ್ಲಿ ವೆಜ್ ಕುರ್ಮಾ ಮಾಡುವ ವಿಧಾನವನ್ನು ತಿಳಿಸಿದ್ದೇವೆ ನೋಡಿ, ಎಷ್ಟು ಅದ್ಭುತ ರುಚಿ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ವೆಜ್ ಕುರ್ಮಾ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯಲ್ಲಿ ವೆಜ್ ಕುರ್ಮಾ ಮಾಡಲು ಬೇಕಾಗುವ ಪದಾರ್ಥಗಳು: 50ml ಎಣ್ಣೆ, 10 – 15 ಹುರುಳಿಕಾಯಿ, 5 ಚಮಚ ಹಸಿ ಬಟಾಣಿ, 1 ಆಲೂಗೆಡ್ಡೆ, 1 ಕ್ಯಾರೆಟ್, 15 ಬ್ಯಾಡಿಗೆ ಮೆಣಸಿನಕಾಯಿ, 2 ಈರುಳ್ಳಿ, 1 ನವಿಲುಕೋಸು, 1 ಟೊಮ್ಯಾಟೊ 4 ಚಮಚ ತೆಂಗಿನ ಕಾಯಿ ತುರಿ, 1 ಸ್ಟಾರ್ ಹೂವು, 2 ಏಲಕ್ಕಿ, 4 ಲವಂಗ, 2 ಚಕ್ಕೆ, 1 ಚಮಚ ಹುರಿಗಡಲೆ, 1 ಚಮಚ ಬಿಳಿ ಎಳ್ಳು, 1 ಚಮಚ ಗಸಗಸೆ, 1 ಚಮಚ ಧನಿಯಾ, 1ಗಡ್ಡೆ ಬೆಳ್ಳುಳ್ಳಿ, ಸ್ವಲ್ಪ ಅರಿಶಿನ ಪುಡಿ, 6 – 8 ಹಸಿಮೆಣಸಿನಕಾಯಿ, ಒಂದು ಇಂಚು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ವೆಜ್ ಕುರ್ಮಾ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರನ್ನು ಇಟ್ಟುಕೊಂಡು ಅದಕ್ಕೆ ಸಣ್ಣಗೆ ಹಚ್ಚಿದ ಹುರಳಿಕಾಯಿ, ಸಣ್ಣಗೆ ಹಚ್ಚಿದ ಆಲುಗಡ್ಡೆ, ಹಸಿರು ಬಟಾಣಿ,ಸಣ್ಣಗೆ ಹಚ್ಚಿದ ನವಿಲುಕೋಸು, ಸಣ್ಣಗೆ ಹಚ್ಚಿದ ಕ್ಯಾರೆಟ್ ಹಾಗೂ ತರಕಾರಿ ಬೇಯುವಸ್ಟು ನೀರನ್ನು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಕೂಗಿಸಿಕೊಳ್ಳಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಬ್ಯಾಡಿಗೆ ಮೆಣಸಿನಕಾಯಿ ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಪ್ಲೇಟ್ ಗೆ ಹಾಕಿ ಪಕ್ಕಕ್ಕಿಡಿ. ನಂತರ ಅದೇ ಬಾಣಲೆಗೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಹಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಹೂವು, ಧನಿಯಾ, ಸಣ್ಣಗೆ ಹಚ್ಚಿದ ಶುಂಠಿ, ಬೆಳ್ಳುಳ್ಳಿ, ಹುರಿಗಡಲೆ, ಬಿಳಿ ಎಳ್ಳು, ಗಸಗಸೆ ಹಾಗೂ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ ಹಾಗೂ ಫ್ರೈ ಮಾಡಿಕೊಂಡ ಬ್ಯಾಡಿಗೆ ಮೆಣಸಿನಕಾಯಿ, ತೆಂಗಿನಕಾಯಿ ತುರಿ ಹಾಗು ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೆಟೋ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆಯನ್ನು ಹಾಕಿ ಕುದಿಯಲು ಬಿಡಿ. ನಂತರ ಇದಕ್ಕೆ ಬೇಯಿಸಿಕೊಂಡ ತರಕಾರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿಕೊಂಡರೆ ಹೋಟೆಲ್ ಶೈಲಿಯಲ್ಲಿ ವೆಜ್ ಕುರ್ಮಾ ಸವಿಯಲು ಸಿದ್ಧ.

Comments are closed.