ಬಾಯಿ ಚಪ್ಪರಿಸಿ ತಿನ್ನುವಂತಹ ಕೆಂಪು ಚಟ್ನಿ ಹೋಟೆಲ್ ಶೈಲಿಯಲ್ಲಿ ಕೆಂಪು ಚಟ್ನಿ ಚಿಟಿಕೆಯಷ್ಟು ಸುಲಭವಾಗಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಕೆಂಪು ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯ ಕೆಂಪು ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 4 ಚಮಚ ಹುರಿಗಡಲೆ, 4 ಚಮಚ ತೆಂಗಿನಕಾಯಿತುರಿ,1 ಟೊಮ್ಯಾಟೋ, 1 ಈರುಳ್ಳಿ, 4 ಒಣಮೆಣಸಿನಕಾಯಿ, 8 ಬ್ಯಾಡಿಗೆ ಮೆಣಸಿನಕಾಯಿ,5 – 6 ಬೆಳ್ಳುಳ್ಳಿ ಎಸಳು, ಸ್ವಲ್ಪ ಕರಿಬೇವು, 2 ಚಮಚ ಎಣ್ಣೆ, ಸ್ವಲ್ಪ ಶುಂಠಿ, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಸಾಸಿವೆ, ಅರ್ಧ ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಹೋಟೆಲ್ ಶೈಲಿಯ ಕೆಂಪು ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಒಣಮೆಣಸಿನಕಾಯಿ ಹಾಗೂ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ 30 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ ಈರುಳ್ಳಿ, ಹಚ್ಚಿದ ಟೊಮೆಟೊವನ್ನು ಹಾಕಿ 2 – 3 ನಿಮಿಷಗಳ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ನೀರನ್ನು ಹಾಕಿಕೊಂಡು ಮತ್ತೆ 2 – 3 ನಿಮಿಷಗಳ ಕಾಲ ಚೆನ್ನಾಗಿ ಪ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ, ತೆಂಗಿನಕಾಯಿ ತುರಿ, ಹುರಿಗಡಲೆ, ಬೆಳ್ಳುಳ್ಳಿ ಎಸಳು, ಹುಣಸೆಹಣ್ಣು, ಸ್ವಲ್ಪ ಶುಂಠಿ, ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಸಣ್ಣ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಹೋಟೆಲ್ ಶೈಲಿಯ ಕೆಂಪು ಚಟ್ನಿ ಸವಿಯಲು ಸಿದ್ಧ.

Comments are closed.