ಹೋಟೆಲ್ ಗಿಂತಲೂ ಹೆಚ್ಚಿನ ರುಚಿಯ ಕುಷ್ಕ ರೈಸ್ ಅನ್ನು ಮನೆಯಲ್ಲಿಯೇ ತಯಾರಿಸಿ, ಅದು ಸುಲಭವಾಗಿ ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕುಷ್ಕ ರೈಸ್ ತಿನ್ನೋಕೆ ಅಂತಾನೇ ಹೋಟೆಲ್ ಗೆ ಹೋಗ್ತಾರೆ ನಾನ್ ವೆಜ್ ಪ್ರಿಯರು. ಅದರಲ್ಲೂ ಬೆಂಗಳೂರಿನ ಕೆಲವು ಹೋಟೆಲ್ ಗಳು ಕುಷ್ಕ ರೈಸ್, ಬಿರಿಯಾನಿಗಳಿಗೆ ಸಕ್ಕತ್ ಫೇಮಸ್. ಆದ್ರೆ ಕರೋನ ಬಂದಮೇಲೆ ಹೋಟೆಲ್ ಗಳಲ್ಲಿ ಆಹಾರ ಸೇವಿಸುವುದು ಅಂದ್ರೇನೇ ಭಯ. ಹಾಗಾಗಿ ಮನೆಯಿಂದ ಹೊರಗೆ ಹೋಗಿ ಆಹಾರ ಸೇವಿಸುವ ಸಂಖ್ಯೆಯೂ ಕಡಿಮೆಯಾಗಿದೆ.

ಅರೆ, ಅದಕ್ಯಾಕೆ ಯೋಚನೆ ಮಾಡ್ತೀರಿ. ಬನ್ನಿ, ನಿಮಗಿಷ್ಟವಾದ ಕುಷ್ಕ ರೈಸ್ ಮನೆಯಲ್ಲಿಯೇ ಹೇಗೆ ಮಾಡೋ ವಿಧಾನ ಹೇಳಿ ಕೊಡ್ತೀವಿ. ಮೊದಲಿಗೆ 2 ಲೋಟ ಅಕ್ಕಿಯನ್ನು ನೀರಿಗೆ ಹಾಕಿ ತೊಳೆದು ನೆನೆಸಿಕೊಳ್ಳಿ. ಇಲ್ಲಿ ನಾರ್ಮಲ್ ರೈಸ್ ಅಥವಾ ಬಸುಮತಿ ಯಾವ ಅಕ್ಕಿ ಬೇಕಾದರೂ ತೆಗೆದುಕೊಳ್ಳಬಹುದು. ಇನ್ನು ಒಂದು ಮಿಕ್ಸರ್ ಜಾರ್ ಗೆ 10-12 ಬೆಳ್ಳುಳ್ಳಿ ಎಸಲುಗಳು, ಸ್ವಲ್ಪ ಶುಂಠಿ, ಪುದೀನಾ ಸೊಪ್ಪು ಸ್ವಲ್ಪ, 2 ಹಸಿಮೆಣಸು ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ. ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ನುಣ್ಣಗೆ ರುಬ್ಬಿದ ಪೇಸ್ಟ್ ನ್ನು ಒಂದು ಪಾತ್ರೆಗೆ ತೆಗೆದಿರಿಸಿಕೊಳ್ಳಿ.

ಕುಷ್ಕವನ್ನು ಕುಕ್ಕರ್ ಪಾತ್ರೆಯಲ್ಲಿ ಮಾಡಬಹುದು. ಒಂದು ಕುಕ್ಕರ್ ಪಾತ್ರೆಯನ್ನು ಒಲೆಮೇಲಿಟ್ಟು ಅದಕ್ಕೆ 2 ಚಮಚ ಅಡುಗೆ ಎಣ್ಣೆ ಹಾಗೂ 2 ಚಮಚ ತುಪ್ಪ ವನ್ನು ಹಾಕಿ. ತುಪ್ಪವನ್ನು ಜಾಸ್ತಿ ಬೇಕಾದ್ರೂ ಹಾಕಿಕೊಳ್ಳಬಹುದು. ಅದು ನಿಮ್ಮ ಆಯ್ಕೆಗೆ ಬಿಟ್ಟಿದ್ದು. ತುಪ್ಪ ಸ್ವಲ್ಪ ಬಿಸಿಯಾದಾಗ ಗರಂ ಮಸಾಲೆ ಪದಾರ್ಥಗಳಾದ ಪಲಾವ್ ಎಲೆ, ಚೆಕ್ಕೆ, ಲವಂಗ, ಚಕ್ರ, ಜಾಯ್ ಪಾತ್ರೆ, ಏಲಕ್ಕಿ, ಇವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಿ. ಇದಕ್ಕೆ ಹೆಚ್ಚಿಟ್ಟುಕೊಂಡ 2 ದೊಡ್ಡ ಈರುಳ್ಳಿ ಯನ್ನು ಸೇರಿಸಿ. ಈರುಳ್ಳಿ ಜಾಸ್ತಿ ಹಾಕಿದಷ್ಟು ರುಚಿ ಹೆಚ್ಚು. ಈರುಳ್ಳಿ ಚೆನ್ನಾಗಿ ಫ್ರೈ ಅದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡ 2 ಟೊಮ್ಯಾಟೋ ಹಣ್ಣನ್ನು ಸೇರಿಸಿ ಫ್ರೈ ಮಾಡಿ. ಇದು ಚೆನ್ನಾಗಿ ಫ್ರೈ ಅದ ನಂತರ ಸ್ವಲ್ಪ ಉಪ್ಪು ಮತ್ತು ಅರ್ಧ ಚಮಚ ಅರಿಸಿನವನ್ನು ಸೇರಿಸಿ ಮಿಕ್ಸ್ ಮಾಡಿ.

ಇನ್ನು ಟೊಮ್ಯಾಟೋ ಮೃದುವಾಗುತ್ತಿದ್ದ ಹಾಗೆ ಆಗಲೇ ರುಬ್ಬಿಟ್ಟುಕೊಂಡ ಪೇಸ್ಟ್ ನ್ನು ಸೇರಿಸಿ ಮಿಕ್ಸ್ ಮಾಡಿ. ಹಸಿ ವಾಸನೆ ಹೋಗುವವರೆಗೂ ಮಿಕ್ಸ್ ಮಾಡಿದ ಬಳಿಕ ಮಸಾಲ ಪುಡಿಗಳನ್ನು ಸೇರಿಸಿಕೊಳ್ಳಬೇಕು. ಕಾಲು ಚಮಚ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ, ಒಂದು ಚಮಚ ಅಚ್ಚ ಖಾರದ ಪುಡಿ, ಒಂದು ಚಮಚ ಬಿರಿಯಾನಿ ಮಸಾಲ ( ಮನೆಯಲ್ಲಿಯೇ ತಯಾರಿಸಿದ್ದು ಬಳಸಿದ್ರೆ ಒಳ್ಳೆಯದು) ಇವೆಲ್ಲವನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಇನ್ನು ಇದಕ್ಕೆ ಒಂದು ಸಣ್ಣ ಕಪ್ ಮೊಸರನ್ನು ಸೇರಿಸಿ ಮಿಕ್ಸ್ ಮಾಡಿ. ಅಗತ್ಯಕ್ಕೆ ಬೇಕಾದಷ್ಟು ಉಪ್ಪನ್ನು ಸೇರಿಸಿ. ಅರ್ಧ ಚಮಚದಷ್ಟು ನಿಂಬೆರಸ ಸೇರಿಸಿ. ಇದು ಬೇಕಾದ್ರೆ ಮಾತ್ರ ಹಾಕಿಕೊಳ್ಳಿ. ಹಾಕದಿದ್ರೂ ನಡೆಯುತ್ತೆ. ನಂತರ ಅರ್ಧ ಚಮಚ ಸಕ್ಕರೆಯನ್ನು ಸೇರಿಸಿ. ಮೊಸರಿನ ಬದಲು ಯೋಗರ್ಟ್ ಹಾಕಿದ್ರೆ ಸಕ್ಕರೆ ಬಲಸಬೇಕಾಗಿಲ್ಲ. ಎಲ್ಲವನ್ನೂ ಚೆನ್ನಾಗಿ ಕಲಸಿ.

ಈ ಮಿಶ್ರಣಕ್ಕೆ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ನೀರನ್ನು ಹಾಕಿ. ನಾರ್ಮಲ್ ಅಕ್ಕಿಗೆ 2 ಕಪ್ ಗೆ 4 ಕಪ್ ನೀರು ಹಾಗೂ ಬಾಸುಮತಿ ರೈಸ್ ಆದ್ರೆ 2 ಕಪ್ ಗೆ ಒಂದೂವರೆ ಕಪ್ ನೀರನ್ನು ಹಾಕಿದ್ರೆ ಸಾಕು. ಈ ಹಂತದಲ್ಲಿ ಉಪ್ಪು ಹುಳಿ ಖಾರ ಬೇಕಿದ್ರೆ ಸೇರಿಸಿ. ಕೊನೆಯಲ್ಲಿ ಸ್ಪಲ್ಪ ತುಪ್ಪ, ಕೊತ್ತಂಬರಿ ಸೊಪ್ಪು ಅಥವಾ ಪುದೀನಾ ಸೊಪ್ಪನ್ನು ಮೇಲಿಂದ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಜಲ್ ಕೂಗಿಸಿ. ಕುಕ್ಕರ್ ತಣ್ಣಗಾದ ನಂತರ ಮುಚ್ಚಳ ತೆಗೆದು ಸ್ವಲ್ಪ ಮಿಕ್ಸ್ ಮಾಡಿ ಬಡಿಸಿ. ಸೂಪರ್ ಆದ ಈ ಕುಷ್ಕ ರೈಸ್ ನ್ನು ಒಮ್ಮೆ ನೀವೂ ಮನೆಯಲ್ಲಿ ಮಾಡಿ ನೋಡಿ.

Comments are closed.