ಪಕ್ಕ ನಾಟಿ ಸ್ಟೈಲ್. ತೆಳ್ಳಗಿನ ನೀರು ದೋಸೆ ನೀರು ಚಟ್ನಿ ಬಾಯಲ್ಲಿ ನಿರೂರಿಸುತ್ತೆ; ಮಾಡೋದಕ್ಕೂ ಸುಲಭ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಕನ್ನಡ ಭಾಗದ ತಿನಿಸು ನೀರು ದೋಸೆ. ಈ ಭಾಗದಲ್ಲಿ ಪ್ರತಿದಿನವೂ ಈ ದೋಸೆಯನ್ನು ಬೆಳಗ್ಗಿನ ಉಪಹಾರಕ್ಕೆ ಮಾಡಲಾಗುತ್ತದೆ. ಇದರ ರುಚಿ ಎಷ್ಟು ಎಂದರೆ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಹೋಟೆಲ್ ಗಳಲ್ಲಿ ಕೂಡ ಈ ದೋಸೆಯನ್ನು ಮೆನುವಿನಲ್ಲಿ ಸೇರಿಸಲಾಗಿದೆ. ಈ ನೀರು ದೋಸೆ ತಿನ್ನೊಕೆ ಎಷ್ಟು ರುಚಿಯೂ ಮಾಡೋಕು ಅಷ್ಟೇ ಸುಲಭ. ಹಾಗಾದರೆ ಬನ್ನಿ ನೀರು ದೋಸೆ ಹಾಗೂ ರುಚಿಕರವಾದ ನೀರು ಚಟ್ನಿ ಮಾಡೋದು ಹೇಗೆ ಅಂತ ತಿಳಿಸುತ್ತೇವೆ.

ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: ಅಕ್ಕಿ 3 ಕಪ್, ಉಪ್ಪು ಹಾಗೂ ನೀರು. ಇನ್ನು ಚಟ್ನಿಗೆ: ತೆಂಗಿನ ತುರಿ ಅರ್ಧ ಕಪ್, ಹುಣಸೆ ಹಣ್ಣು ಸ್ವಲ್ಪ, ಉದ್ದಿನ ಬೇಳೆ ಅರ್ಧ ಚಮಚ, ಹಸಿಮೆಣಸು-3, ಉಪ್ಪು ರುಚಿಗೆ, ಒಗ್ಗರಣೆಗೆ: ತೆಂಗಿನ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು.

ನೀರು ದೋಸೆ ಮಾಡುವ ವಿಧಾನ: 3 ಕಪ್ ಅಕ್ಕಿಯನ್ನು ರಾತ್ರಿಯಿಡಿ ನೆನೆಸಿಡಿ. ಬೆಳಗ್ಗೆ ನೆನೆಸಿಟ್ಟ ಅಕ್ಕಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಂದು ಲೋಟ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ರುಬ್ಬಿದ ಮಿಶ್ರಣವನ್ನು ನೀರನ್ನು ಹಾಕಿ ತೆಳ್ಳಗೆ ಮಾಡಿ. ಸುಮಾರು 4 ಲೋಟಗಳಷ್ಟು ನೀರನ್ನು ಹಾಕಿ. ಇದು ತೆಳ್ಳಗಾದ ಮೇಲೆ ದೋಸೆ ಮಾಡುವ ತವಾ ಮೇಲೆ ದೋಸೆಯನ್ನು ಹುಯ್ಯಿರಿ. ನೀರು ದೋಸೆಯನ್ನು ಮಾಡಲು ನಾನ್ ಸ್ಟಿಕ್ ತವಾ ಬಳಸಬೇಡಿ, ನೀರು ದೋಸೆ ಮಾಡುವ ಕಬ್ಬಿಣದ ತವಾ ಸಿಗುತ್ತದೆ. ಅದನ್ನ ಉಪಯೋಗಿಸಿದರೆ ದೋಸೆ ರುಚಿಯಾಗಿ ಬರುತ್ತದೆ.

ಇನ್ನು ಚಟ್ನಿ ಮಾಡಲು ಅರ್ಧ ಚಮಚ ಉದ್ದಿನ ಬೇಳೆಯನ್ನು ಹುರಿದುಕೊಳ್ಳಿ. ನಂತರ ಒಂದು ಮಿಕ್ಸರ್ ಜಾರ್ ಗೆ ತೆಂಗಿನ ತುರಿ, ಉದ್ದಿನ ಬೇಳೆ, ಹಸಿ ಮೆಣಸು, ಸ್ವಲ್ಪ ಹುಣಸೆಹಣ್ಣು, ಉಪ್ಪು ಹಾಗೂ ನೀರನ್ನು ಹಾಕಿ ರುಬ್ಬಿಕೊಳ್ಳಿ. ಈ ಚಟ್ನಿ ತುಂಬಾನೇ ತೆಳ್ಳಗಿರಬೇಕು. ನಂತರ ಒಂದು ಬಾಣಲೆಗೆ ತೆಂಗಿನ ಎಣ್ಣೆ, ಸಾಸಿವೆ, ಜಜ್ಜಿಕೊಂಡ ಬೆಳ್ಳುಳ್ಳಿ(ಇಂಗನ್ನೂ ಕೂಡ ಬದಲಿಯಾಗಿ ಬಳಸಬಹುದು) ಕರಿಬೇವು ಹಾಕಿ ಚಟ್ನಿಗೆ ಒಗ್ಗರಣೆ ಕೊಟ್ಟರೆ ಬೆಳಗಿನ ಉಪಹಾರಕ್ಕೆ ಸೂಪರ್ ಆದ ನೀರು ದೋಸೆ ಹಾಗೂ ನೀರು ಚೆಟ್ನಿ ರೆಡಿ.

Comments are closed.