ಮೈಸೂರು ಜಿಲ್ಲೆಯ ಪಂಚಲಿಂಗಗಳ ವಿಶೇಷತೆ ಏನು..? ನಿಮಗೆ ತಿಳಿಯದ ಆಸಕ್ತಿಕರ ಮಾಹಿತಿಗಳು !

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಇತಿಹಾಸ ಪ್ರಸಿದ್ಧ ತಲಕಾಡಿನ ಪಂಚಲಿಂಗ ದರ್ಶನ, ಕಾರ್ತಿಕಮಾಸದ ಕೊನೆಯವಾರ ನಡೆಯುತ್ತದೆ. ಒಂದು ಶುಭ ದಿನದಲ್ಲಿ ಎಲ್ಲಾ ಐದು ಶಿವ ದೇವಾಲಯಗಳಿಗೆ ಭೇಟಿ ನೀಡುವ ಅವಕಾಶವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಬರುತ್ತದೆ.

ಐದು ದೇವಾಲಯಗಳು ಶಿವನ ಐದು ವಿಭಿನ್ನ ಮುಖಗಳನ್ನು ಅಥವಾ ಅವತಾರಗಳನ್ನು ಪ್ರತಿನಿಧಿಸುತ್ತವೆ ಎಂದು ಭಾವಿಸಲಾಗಿದೆ. ಶುಭ ದಿನದಂದು ಪೂಜಿಸುವ ದೇವಾಲಯಗಳೆಂದರೆ, ಕಾರ್ತಿಕ ಮಾಸದಲ್ಲಿ ಐದು ಸೋಮವಾರ ಬರುವ ಸಂದರ್ಭದಲ್ಲಿ ಸೂರ್ಯ ವೃಶ್ಚಿಕ ಮಾಸದ ಐದನೇ ಸೋಮವಾರ ಅಮಾವಾಸ್ಯೆ ದಿನ ಪಂಚಲಿಂಗ ದರ್ಶನ ನಡೆಯುತ್ತದೆ.

ಅರ್ಕೇಶ್ವರ: ಉತ್ತರವಾಹಿನಿ ಕಾವೇರಿ ತಟದಲ್ಲಿ ಸೂರ್ಯ(ಅರ್ಕ) ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದ್ದ ದ್ಯೋತಕವಾಗಿ ಅರ್ಕೇಶ್ವರ ಹೆಸರಿನಲ್ಲಿ ಲಿಂಗ ರೂಪಿಯಾಗಿ ಶಿವನನ್ನು ಪೂಜಿಸಲಾಗುತ್ತದೆ.

ಪಾತಾಳೇಶ್ವರ: ಪೂರ್ವವಾಹಿನಿಯಲ್ಲಿ ತಪೋನಿರತ ವಾಸುಕಿ(ಸರ್ಪ)ಗೆ ಶಿವ ಪ್ರತ್ಯಕ್ಷನಾಗಿದ್ದರಿಂದ ವಾಸುಕೇಶ್ವರನ ಉದಯವಾಯಿತು. ಸರ್ಪದೋಷ ನಿವಾರಣೆಗೆ ಕ್ಷೇತ್ರ ಪ್ರಸಿದ್ಧಿ.

ಮರಳೇಶ್ವರ: ಸರಸ್ವತಿಯನ್ನು ವಿವಾಹವಾಗಲು ಅನುಮತಿ ಕೋರಿ ಬ್ರಹ್ಮದೇವ ದಕ್ಷಿಣ ದಿಕ್ಕಿನಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮಿಂದು ಮರಳಿನಲ್ಲಿ ಲಿಂಗ ಸಂಸ್ಕೃತದಲ್ಲಿ ಸೈತಕ ಎಂದರೆ ಮರಳು ಮಾಡಿ ಶಿವನನ್ನು ಪೂಜಿಸುತ್ತಾನೆ. ಬ್ರಹ್ಮಹತ್ಯಾದೋಷ ಪರಿಹಾರ ಇಲ್ಲಿ ಸಿಗುತ್ತದೆ

ಮಲ್ಲಿಕಾರ್ಜುನ: ಪಶ್ಚಿಮವಾಹಿನಿ ಕಾವೇರಿ ಹರಿಯುವ ಮುಡುಕುತೊರೆ ಅಥವಾ ಸೋಮಗಿರಿಯಲ್ಲಿ ದಿಲೀಪ-ದಮಯಂತಿ ದಂಪತಿಗೆ ವಿಷ ಪ್ರಾಶನ ದೋಷ ನಾಶ ಮಾಡಿದ ಮಲ್ಲಿಕಾರ್ಜುನ ಸ್ವಾಮಿ ಇಲ್ಲಿ ನೆಲೆಸಿದ್ದಾನೆ.
ಮಧ್ಯಮ ಪಾಂಡವ ಅರ್ಜುನ ಇಲ್ಲಿ ಮಲ್ಲಿಕಾ ಪುಷ್ಪಗಳಿಂದ ಶಿವನನ್ನು ಪೂಜಿಸಿದ ಎನ್ನಲಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಜತೆ ತಲೆಯಲ್ಲಿ ಕಾಮಧೇನುವಿನ ಪಾದದ ಚಿನ್ಹೆ ಜತೆಗೆ ಭ್ರಮರಾಂಭ ದೇವಿಯೂ ಇಲ್ಲಿ ನೆಲೆಸಿದ್ದು ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ

ವೈದ್ಯನಾಥೇಶ್ವರ: ಕಾವೇರಿ-ಕಪಿಲಾ ಸಂಗಮದ ಗಜಾರಣ್ಯ ಕ್ಷೇತ್ರದಲ್ಲಿ ತಪಸ್ಸು ಮಾಡಲು ವಶಿಷ್ಠ ಕುಲದ ಸೋಮದತ್ತ ಎಂಬ ಋಷಿ ಇಲ್ಲಿಗೆ ಬರುತ್ತಾರೆ. ಆದರೆ, ಕಾಡಾನೆಯಿಂದ ಸೋಮದತ್ತ ಹತನಾಗುತ್ತಾನೆ. ಮುಂದಿನ ಜನ್ಮದಲ್ಲಿಆನೆಯಾಗಿ ಹುಟ್ಟಿ ಈ ಕ್ಷೇತ್ರದಲ್ಲಿ ಗೋಕರ್ಣ ಕೊಳದಲ್ಲಿ ಮಿಂದು ಲಿಂಗಕ್ಕೆ ಪೂಜೆ ಸಲ್ಲಿಸುತ್ತದೆ.

ತಲ ಮತ್ತು ಕಾಡ ಎಂಬ ಬೇಡರಿಬ್ಬರು ಶಿವಲಿಂಗ ಭಗ್ನಗೊಳಿಸುತ್ತಾರೆ. ಇವರ ವಿರುದ್ಧ ಆನೆ ತಿರುಗಿಬೀಳುತ್ತದೆ. ಶಿವ ಪ್ರತ್ಯಕ್ಷನಾಗಿ ಎಲ್ಲರಿಗೂ ಮೋಕ್ಷ ಕರುಣಿಸುತ್ತಾನೆ. ಗಾಯಗೊಂಡ ಲಿಂಗ ರೂಪಿ ಶಿವನಿಗೆ ಗಿಡಮೂಲಿಕೆಯ ಸುಶ್ರೂಷೆ ಸಿಗುತ್ತದೆ. ವೈದ್ಯನಾಥೇಶ್ವರನ ಜತೆ ಮನೋನ್ಮಣಿ ಅಮ್ಮನವರು ಇಲ್ಲಿ ನೆಲೆಸಿದ್ದಾರೆ.

ಮಾಲಂಗಿ ಮಡುವಾಗಲಿ..ತಲಕಾಡು ಮರಳಾಗಲಿ…ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ನೀಡಿದ್ದರ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತೆ. ಶಾಪದ ಫಲವೋ ವೈಜ್ಞಾನಿಕ ಅಚ್ಚರಿಯೋ ಎಂಬಂತೆ ತಲಕಾಡು ಮರಳುಗಾಡಿನಂತೆ ಇದೆ. ಪಕ್ಕದಲ್ಲೇ ತುಂಬಿ ಹರಿಯುವ ಕಾವೇರಿ ನದಿ ಇದರೂ ದೇಗುಲಗಳ ಸುತ್ತ ಮುತ್ತ ಎತ್ತ ನೋಡಿದರೂ ಅತ್ತ ಮರಳು ರಾಶಿ ಎದ್ದು ಕಾಣುತ್ತದೆ. ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಹೆಚ್ಚು ಮರಳು ತುಂಬಿರುವ ಪಾತೇಳ್ವರ, ವೈದ್ಯನಾಥೇಶ್ವರ ದೇವಾಲಯಗಳಲ್ಲಿ ಮರಳನ್ನು ತೆಗೆದು, ಪೂಜೆಗೆ ಅಣಿಗೊಳಿಸಲಾಗುತ್ತದೆ.ಅದೇನೆ ಇರಲಿ ಇಲ್ಲಿಯ ಸೌಂದರ್ಯ ನೋಡಲುಕಣ್ಣೆರಡು..ಸಾಲದು.ಜೀವನದಲ್ಲಿ ಒಮ್ಮೆಯಾದರೂ ಪಂಚಲಿಂಗ ದರ್ಶನ ಮಾಡಿ.ಪುನೀತರಾಗಿ

Comments are closed.